WWW.TULUFILM.COM
+91 96327 14896 info@tulufilm.com
Yakshagana
ಯಕ್ಷಗಾನ
Published on 8 September 2016
yakshagana-11

91 004

ಯಕ್ಷಗಾನವು ಕರಾವಳಿ ಕರ್ನಾಟಕದ ಪುರಾತನ ಮತ್ತು ವಿಶಿಷ್ಟ ಕಲೆ. ಪ್ರಾದೇಶಿಕ ರಂಗಭೂಮಿಯ ತಾಯಿಬೇರಿನಂತಿರುವ ಈ ಕಲೆಯು ನಮ್ಮ ಪೂರ್ವಿಕರು ನೀಡಿರುವ ಒಂದು ಅಪೂರ್ವ ಕೊಡುಗೆಯಾಗಿದೆ.
ಹಿಂದಿನ ಕಾಲದಲ್ಲಿ ಯಕ್ಷಗಾನವನ್ನು ಬಯಲು ರಂಗಮಂಟಪದಲ್ಲಿ ಆಹೋರಾತ್ರಿ ಉಚಿತವಾಗಿ ಪ್ರದರ್ಶಿಸುತ್ತಿದ್ದರು. ಉಳ್ಳವರು ಯಕ್ಷಗಾನ ಬಯಲಾಟಗಳನ್ನು ಆಡಿಸುತ್ತಿದ್ದರು. ಇಂದು ಕೂಡಾ ಇದು ಮುಂದುವರಿದಿದ್ದರೂ, ಯಕ್ಷಗಾನವು ಮುಂದೆ ಟೆಂಟು ಮತ್ತು ಸಭಾಂಗಣಗಳಿಗೆ ವರ್ಗಾವಣೆಗೊಂಡು ಟಿಕೆಟ್ ಆಟವಾಗಿ ಬದಲಾಗಿ ಮುಂಬಯಿಯಂತಹ ನಗರಗಳಲ್ಲಿ ಮತ್ತು ವಿದೇಶಗಳಲ್ಲಿಯೂ ಪ್ರದರ್ಶನ ಕಂಡಿದೆ. ಹಾಗೆಂದು ಹರಕೆಯ ಬಯಲಾಟಗಳು ಅವ್ಯಾಹತವಾಗಿ ಸಾಗುತ್ತದೆ. ಕಟೀಲು, ಧರ್ಮಸ್ಥಳ, ಕಮಲಶಿಲೆ, ಸುಂಕದಕಟ್ಟೆ ಮುಂತಾದ ದೇವಾಲಯಗಳ ಮೇಳಗಳಿಂದ ಇದು ನಡೆಯುತ್ತದೆ. ಕೆಲವು ದೇವಳಗಳಲ್ಲಿ ಮೂರು ನಾಲ್ಕು ಹರಕೆಯಾಟದ ಮೇಳಗಳಿದ್ದರೂ ಆಟ ಬುಕ್ ಮಾಡಿಸಿ ವರ್ಷಗಟ್ಟಲೆ ಸರದಿಗಾಗಿ ಕಾಯುವ ಪರಿಸ್ಥಿತಿ ಇದೆ. ಇದು ಇಲ್ಲಿನ ಜನರು ಮತ್ತು ಯಕ್ಷಗಾನ ಕಲೆಗೆ ಇರುವ ಗಟ್ಟಿ ಸಂಬಂಧವನ್ನು ತೋರಿಸುತ್ತದೆ. ಹವ್ಯಾಸಿ ತಂಡಗಳೂ ಯಕ್ಷಗಾನ ಪ್ರದರ್ಶಿಸುತ್ತವೆ. ಇದು ಬೇಸಿಗೆಗಾಲದ ಕಥೆಯಾದರೆ, ಮಳೆಗಾಲದಲ್ಲಿ ಹಳ್ಳಿಯ ದೊಡ್ಡ ಮನೆಗಳ, ಶಾಲೆಗಳ ಜಗಲಿಗಳಲ್ಲಿ, ದೇವಸ್ಥಾನದ ಪ್ರಾಂಗಣಗಳಲ್ಲಿ ಯಕ್ಷಗಾನ ತಾಳಮದ್ದಳೆಗಳು ನಡೆಯುತ್ತಿದ್ದವು. ಇವೀಗ ಕಡಿಮೆಯಾಗಿವೆ.
ಯಕ್ಷಗಾನವು ನಾಟಕರಂಗದ ಎಲ್ಲಾ ಸಾಧ್ಯತೆಗಳನ್ನು ಒಳಗೊಂಡಿದೆ. ಅಲಂಕೃತವಾದ ರಂಗಮಂಟಪದಲ್ಲಿ ವರ್ಣರಂಜಿತ ವೇಷಧಾರಿಗಳು ಕುಣಿದು, ಅಭಿನಯಿಸುತ್ತಾ, ನವರಸಗಳ ಪ್ರದರ್ಶನ ಮಾಡುತ್ತಾ, ಸಂವಾದದಲ್ಲಿ ತೊಡಗಿದ್ದರೆ, ಆಬಾಲವೃದ್ಧರಾದಿಯಾಗಿ ಪ್ರೇಕ್ಷಕರು ಸುತ್ತಲೂ ಕುಳಿತು ಬೆರಗುಗಣ್ಣುಗಳಿಂದ ನೋಡುತ್ತಾ ಕಥಾಪಾತ್ರಗಳಲ್ಲಿ ತಲ್ಲೀನರಾಗುತ್ತಾರೆ ಮಾತ್ರವಲ್ಲ ಮನಸ್ಸಿನ ಒಳಗೆಯೇ ಸ್ವತಃ ಪಾತ್ರಧಾರಿಗಳೂ ಆಗುತ್ತಾರೆ. ಕಲಾವಿದರ ಕಲ್ಪನೆಯಲ್ಲಿ ಅವರು ಕಾಡಾಗುತ್ತಾರೆ, ಸಮುದ್ರವಾಗುತ್ತಾರೆ. ಉದಾಹರಣೆಗೆ ದೇವಿ ಮಹಾತ್ಮೆಯ ಮಹಿಷಾಸುರ ಬ್ಯಾಂಡ್ಗಳ ಭರಾಟೆಯಲ್ಲಿ ಬೆಂಕಿಯ ಸೂಟೆಗೆ ಅರಗು ಎಸೆದು ಬೆಂಕಿಯ ಜ್ವಾಲೆಗಳನ್ನೆಬ್ಬಿಸುತ್ತಾ ಪ್ರೇಕ್ಷಕರ ನಡುವಿನಿಂದಲೇ ಬಂದು ರಂಗಸ್ಥಳವನ್ನು ಪ್ರವೇಶಿಸುತ್ತಾನೆ. ಭಾಗವತನು ಸೂತ್ರಧಾರಿಯಾಗಿದ್ದು ಕಥೆಯ ಓಟವನ್ನು ನಿರ್ದೇಶಿಸುತ್ತಾನೆ.
ಸಂಗೀತ, ನೃತ್ಯ, ನಾಟಕ ಮತ್ತು ಸಾಹಿತ್ಯದ ಸಮ್ಮಿಳನವಾಗಿರುವ ಯಕ್ಷಗಾನವು ಭರತನ ‘ನಾಟ್ಯಶಾಸ್ತ್ರ’ದಲ್ಲಿರುವ ಎಲ್ಲಾ ನಾಲ್ಕು ಪ್ರಕಾರಗಳ ರೂಡಿಸಿಕೊಂಡಿರುವ ಕಲೆ ಎಂದು ವಿದ್ವಾಂಸ ರಾಧಾಕೃಷ್ಣ ಉರಾಳ ಹೇಳುತ್ತಾರೆ. ಯಕ್ಷಗಾನದ ಪ್ರಮುಖ ಆಕರ್ಷಣೆ ಎಂದರೆ ವರ್ಣರಂಜಿತ ವೇಷಭೂಷಣಗಳು. ಹಿಂದೆ ಅವರು ಗಂಟೆಗಟ್ಟಲೆ ಮುಖವರ್ಣಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು ಮತ್ತು ಪಾತ್ರದ ಬಗ್ಗೆಯೇ ಚಿಂತಿಸುತ್ತಾ ಸ್ವತಃ ಪಾತ್ರವೇ ಆಗಿಬಿಡುತ್ತಿದ್ದರು. ರಾಕ್ಷಸ ವೇಷಗಳ, ಅಂದರೆ, ಬಣ್ಣದ ವೇಷಗಳು ಮಧ್ಯಾಹ್ನ ಹಿಟ್ಟಿನ ಚಿಟ್ಟೆಗಳನ್ನು ಹಚ್ಚಿಕೊಳ್ಳಲು ಕುಳಿತರೆ ಅವರ ಪಾತ್ರಗಳು ವೇದಿಕೆಗೆ ಬರುತ್ತಿದ್ದುದು ಮಧ್ಯರಾತ್ರಿ ಕಳೆದ ಮೇಲೆ. ಅವುಗಳ ಅಬ್ಬರ ಪ್ರೇಕ್ಷಕರ ನಿದ್ದೆಯನ್ನು ಒದ್ದೋಡಿಸುತ್ತಿತ್ತು. ಇದೂ ಕೂಡಾ ಒಂದು ತಂತ್ರ. ಇಂದು ಪ್ಲಾಸ್ಟಿಕ್ ಚಿಟ್ಟೆಗಳು ಬಂದು ಮುಖವರ್ಣಿಕೆ ಸುಲಭವಾಗಿದೆ. ಅವುಗಳ ಬಣ್ಣ, ಅರ್ಥಗಳೂ ಬದಲಾಗಿವೆ. ಹಿಂದಿನ ಕೇಳಿ ಹೊಡೆಯುವುದು, ತೆರೆಯ ಮರೆಯ ಆಟ, ಹೊಸಬರು ನಿರ್ವಹಿಸುತ್ತಿದ್ದ ಕುಕ್ಕುತಪ್ಪು ವೇಷ, ಸ್ತ್ರೀವೇಷ ಇತ್ಯಾದಿಗಳು ಮರೆಯಾಗಿವೆ.
ಯಕ್ಷಗಾನದಲ್ಲಿ ಮುಖ್ಯವಾಗಿ ಎರಡು ಶೈಲಿಗಳಿವೆ. ಇದನ್ನು ತೆಂಕುತಿಟ್ಟು ಮತ್ತು ಬಡಗುತಿಟ್ಟು ಎನ್ನುತ್ತಾರೆ. ಇವುಗಳ ಮುಖವರ್ಣಿಕೆ, ವೇಷಭೂಷಣ, ನೃತ್ಯ, ಅಭಿನಯ, ಹಿಮ್ಮೇಳ ಇತ್ಯಾದಿಗಳಲ್ಲಿ ವ್ಯತ್ಯಾಸಗಳಿವೆ. ತೆಂಕಿನ ಕಿರೀಟಗಳಿಗೆ ಬದಲಾಗಿ, ಬಡಗಿನಲ್ಲಿ ಕೇದಗೆ ಮುಂಡಾಸು ಇದೆ.
ಹಿಂದೆಲ್ಲಾ ಕೇವಲ ಪೌರಾಣಿಕ ಕಥೆಗಳನ್ನು ಆಧರಿಸಿ ಮಾತ್ರ ಯಕ್ಷಗಾನ ಪ್ರಸಂಗಗಳು ಇರುತ್ತಿದ್ದವು. ಸುಮಾರು 50 ವರ್ಷಗಳ ಹಿಂದೆ ಕಾಲ್ಪನಿಕ ಕಥೆಗಳನ್ನು ಒಳಗೊಂಡ ಪ್ರಸಂಗಗಳೂ ಪೌರಾಣಿಕ ಚೌಕಟ್ಟನ್ನು ಹೊಂದಿದ್ದವು. ನಂತರ ಐತಿಹಾಸಿಕ, ಅರೆ ಐತಿಹಾಸಿಕವಾದ ಕಾಲ್ಪನಿಕ ಮತ್ತು ಸಂಪೂರ್ಣ ಕಾಲ್ಪನಿಕ ಪ್ರಸಂಗಗಳು ಬರಲಾರಂಭಿಸಿದವು. ಹಿಂದೆಲ್ಲಾ ಗಂಡಸರೇ ಪಾತ್ರವಹಿಸುತ್ತಿದ್ದರು. ಸ್ತ್ರೀ ಪಾತ್ರಗಳೂ ಅವರದ್ದೇ. ಆದರೆ, ಈಗ ಕೇವಲ ಮಹಿಳೆಯರನ್ನೇ ಒಳಗೊಂಡ ಕೆಲವು ತಂಡಗಳಿವೆ. ಪುರುಷ ಪಾತ್ರಗಳನ್ನೂ ಅವರೇ ನಿರ್ವಹಿಸುತ್ತಾರೆ.
ಕಾಲ ಕಳೆದಂತೆ ಯಕ್ಷಗಾನದ ರೂಪರೇಷೆಗಳು ಬದಲಾಗುತ್ತಿವೆ. ಕುಣಿತದ ಅಬ್ಬರ ಹೆಚ್ಚಾಗುತ್ತಿದೆ. ಸಂಭಾಷಣೆಯ ಪ್ರೌಢಿಮೆ ಕಡಿಮೆಯಾಗುತ್ತಿದೆ. ಅಶ್ಲೀಲ ಮತ್ತು ರಾಜಕೀಯ ಅರ್ಥಬರುವ ಸಂಭಾಷಣೆಗಳನ್ನು ತುರಕುವುದು ಇತ್ಯಾದಿಗಳು ಹೆಚ್ಚಾಗುತ್ತಿವೆ. ಇದರಿಂದಲೇ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುವ ಬದಲು ಕಡಿಮೆಯಾಗುತ್ತಿದೆ. ಇಷ್ಟಿದ್ದರೂ ಯಕ್ಷಗಾನ ತನ್ನ ವೈಶಿಷ್ಟ್ಯಗಳಿಂದಲೇ ಉಳಿದುಕೊಂಡಿದೆ.
ಪಾತ್ರಧಾರಿಗಳು ಯಾರ ನೆರವಿಲ್ಲದೇಯೇ, ತಮ್ಮ ಮುಖವರ್ಣಿಕೆಗಳನ್ನು ಮಾಡಿಕೊಂಡು, ಸ್ವತಃ ವೇಷಭೂಷಣಗಳನ್ನು ತೊಟ್ಟುಕೊಳ್ಳುವುದು, ಸಾಂಕೇತಿಕವಾದ ಪ್ರವೇಶ ಮತ್ತು ನಿರ್ಗಮನ, ಮಾತಿನಲ್ಲಿಯೇ ಕಥಾ ಪರಿಸರ ಮತ್ತು ಪರಿಕರಗಳ ನಿರ್ಮಾಣ, ಮಾತು ಮತ್ತು ಚಲನೆಯಿಂದಲೇ ಒಂದು ದೃಶ್ಯದಿಂದ ಇನ್ನೊಂದು ದೃಶ್ಯಕ್ಕೆ ಅಥವಾ ಒಂದು ಲೋಕದಿಂದ ಇನ್ನೊಂದು ಲೋಕಕ್ಕೆ ಉಲ್ಲಂಘನೆ, ನವರಸಗಳ ಸಂಪೂರ್ಣ ಬಳಕೆ, ಒಂದೊಂದು ರೀತಿಯ ಪಾತ್ರಕ್ಕೂ ಒಂದೊಂದು ರೀತಿಯ ಮುಖವರ್ಣಿಕೆ, ವೇಷಭೂಷಣ, ಕುಣಿತದ ಶೈಲಿ ಇತ್ಯಾದಿಗಳು ಯಕ್ಷಗಾನದ ವೈಶಿಷ್ಟ್ಯಗಳು.
ಯಕ್ಷಗಾನವು ತನ್ನತನವನ್ನು ಉಳಿಸಿಕೊಳ್ಳಲು ಯಶಸ್ವಿಯಾದರೆ, ಸಮರ್ಥ ಕಲಾವಿದರು ಮತ್ತು ಪೋಷಕರು ಇರುವ ವರೆಗೆ ಅದಕ್ಕೆ ಅಳಿದು ಹೋಗುವ ಭಯವಿಲ್ಲ. ಉಳಿದು ಪ್ರಪಂಚದ ಇತರ ಭಾಗಗಳಿಗೂ ಪಸರಿಸುವ ಉಜ್ವಲ ಅವಕಾಶವಿದೆ.

 

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers