WWW.TULUFILM.COM
+91 96327 14896 info@tulufilm.com
Profiles
ನಿಖಿಲ್ ಕೋಲ್ಪೆ, ಪತ್ರಕರ್ತ
Published on 30 September 2016
????????????

ಜಾತಿಭೇದ ಮರೆಸಿದ ತುಳು ಚಿತ್ರ
ಅದು 1973ನೇ ಇಸವಿ. ನನಗಾಗ ಕೇವಲ ಎಂಟು ವರ್ಷ. ತುಳುನಾಡಿನ ಬಿರುವ ಬೀರರಾದ ಕೋಟಿ ಚೆನ್ನಯರ ಕಥೆಯನ್ನು ಪಾಡ್ದನ ಮತ್ತು ಹಿರಿಯರಿಂದ ಕೇಳಿತಿಳಿದಿದ್ದೆ. ಒಂದು ರೀತಿಯ ರಾಮಾಯಣ-ಮಹಾಭಾರತದಂತೆ ಅದು ಎಳೆಯ ಮನಸ್ಸಿನಲ್ಲಿ ಅಚ್ಚೊತ್ತಿತ್ತು.
ಅದೇ ಹೊತ್ತಿಗೆ ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ‘ಕೋಟಿ ಚೆನ್ನಯ‘ ಚಿತ್ರ ಬಿಡುಗಡೆಯಾಗಿದೆ ಎಂಬ ಸುದ್ದಿ ಆಗ ಕುಗ್ರಾಮವಾಗಿದ್ದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಲ್ಲಿರುವ ನಾಯಿಲ ಎಂಬ ನಮ್ಮ ಊರಿನಲ್ಲಿಯೂ ಹಬ್ಬಿತ್ತು. ನನಗೂ ಚಿತ್ರ ನೋಡುವ ತುಂಬಾ ಮನಸ್ಸಾಗಿತ್ತು. ಆಗ ತುಂಬಾ ದೂರ ಅನಿಸುತ್ತಿದ್ದ ಮಂಗಳೂರಿಗೆ ನನ್ನನ್ನು ಕರೆದುಕೊಂಡು ಹೋಗುವವರು ಯಾರು?
ಆಗ ನಮ್ಮ ಮನೆಯ ಕೊಟ್ಟಿಗೆಯಲ್ಲಿ ಸಾಂತು ಎಂಬಾತ ವಾಸವಾಗಿದ್ದ. ಆ ಕಾಲಕ್ಕೆ ಅಸ್ಪೃಶ್ಯನಾಗಿದ್ದ ಆತ ಮತ್ತು ಆತನ ಪತ್ನಿ ಬೊಮ್ಮಿಯನ್ನು ಅಲ್ಲಿ ನೆಲೆನಿಲ್ಲಿಸಲಾಗಿತ್ತು. ನಮ್ಮ ಮನೆಯಲ್ಲಿ ಸಾಗುವಳಿ ಕೆಲಸ ಮಾಡುತ್ತಿದ್ದ ಈ ದಲಿತ ಮಿತ್ರ ನಿರಕ್ಷರಿಯಾಗಿದ್ದರೂ ಎಂತಹ ನಿಷ್ಣಾತನಾಗಿದ್ದ ಎಂದರೆ, ಆಗ ತುಂಬಾ ಚಾಲ್ತಿಯಲ್ಲಿದ್ದ ವಿಲಿಯರ್ಸ್ ಪಂಪನ್ನು ಕೇವಲ ರಿಪೇರ್ ಮ್ಯಾನ್ಯುವೆಲ್ ನ ಚಿತ್ರ ನೋಡಿ ಎಲ್ಲಾ ಕಳಚಿ ಮತ್ತೆ ಜೋಡಿಸುತ್ತಿದ್ದ.
ಮಂಗಳೂರನ್ನು ಎಂದೂ ನೋಡಿರದ ಆತನಿಗೂ ಜ್ಯೋತಿಗೆ ಹೋಗಿ ಕೋಟಿ ಚೆನ್ನಯ ನೋಡಬೇಕೆಂಬ ಆಸೆ ಮೂಡಿತ್ತು. ನನ್ನನ್ನು ಕೊಂಡೊಯ್ದು ಚಿತ್ರ ತೋರಿಸುವ ಜವಾಬ್ದಾರಿಯನ್ನು ನನ್ನ ತಂದೆಯವರು ಅವನ ತಲೆಯ ಮೇಲೆ ಹೊರಿಸಿದರು. ಆ ಕಾಲದಲ್ಲಿ ಅದುವೇ ಒಂದು ಸಾಮಾಜಿಕ ಸಾಹಸ. ಆ ಸಾಹಸಿ ನನ್ನನ್ನು ಜ್ಯೋತಿಗೆ ಕೊಂಡೊಯ್ದ.
ಹೋದಾಗ ನೋಡುವುದೇನು?! ಎಲ್ಲೆಲ್ಲೂ ಜನರು. ನೂರಾರೋ, ಸಾವಿರಾರೋ ಎಂದು ನನಗೆ ಅರಿವಾಗದ ಪ್ರಾಯ. ಟಿಕೆಟ್ಗಾಗಿ ಉದ್ದನೇ ಕ್ಯೂನಲ್ಲಿ ನಿಂತೆವು. ಆಗ ಶುರುವಾಯಿತು ಒಂದು ಚಿಕ್ಕ ಚಲನೆ. ಅದುವೇ ಚಂಡಮಾರುತದಂತೆ-ಎಲ್ಲರ ನಡಿಗೆ ಬಾಕ್ಸ್ ಆಫೀಸ್ ಕಡೆಗೆ ಎಂಬಂತೆ ನೂಕುನುಗ್ಗಲು. ಲೈನ್ ಚೆಲ್ಲಾಪಿಲ್ಲಿ. ಆಗ ಯಾರೋ ಬಂದು ಹೇಳಿದರು- ಒಂದೊಂದು ಸೀಟಿನಲ್ಲಿ ಕುಳಿತುಕೊಳ್ಳಿ, ಟಿಕೆಟ್ ಅಲ್ಲಿಯೇ ಕೊಡುತ್ತೇವೆ ಎಂದು. ಆಗ ಆದದ್ದೇ ಬೇರೆ. ಎಲ್ಲರೂ ಚಿತ್ರಮಂದಿರದೊಳಗೆ ಬಿರುಗಾಳಿಯಂತೆ ನುಗ್ಗಲು ಪ್ರಾರಂಭಿಸಿದರು. ನನ್ನನ್ನೂ ಯಾವತ್ತೂ ಮುಟ್ಟದ ಸಾಂತು ನನ್ನನ್ನು ಎದೆಗವಚಿಕೊಂಡು ಒಳಗೆ ನುಗ್ಗಿದ. ಕುಳ್ಳಗಿದ್ದರೂ ಕಬ್ಬಿಣದಂತೆ ಗಟ್ಟಿಮುಟ್ಟಾಗಿದ್ದ ಅವನು ನನ್ನ ಜೊತೆ ಒಳಗೆ ಹೊಕ್ಕಿದ್ದೇನೋ ನಿಜ; ನನ್ನ ಜೀವವನ್ನೂ ಕಾಲ್ತುಳಿತದಿಂದ ಬದುಕಿಸಿದ.
ಒಳಗೆ ಹೋದ ಕೂಡಲೇ ಎಲ್ಲರೂ ಸಿಕ್ಕಸಿಕ್ಕ ಸೀಟಿನಲ್ಲಿ ಕುಳಿತರು. ನಮ್ಮ ಸಾಂತುವೂ ಒಂದು ಸೀಟು ಹಿಡಿದು ಕುಳಿತ. ನನಗೆ ಸೀಟುಸಿಗಲಿಲ್ಲ. ನಾನು ಅವನ ತೊಡೆಯೇರಿ ಕುಳಿತೆ. ಸ್ಪಶ್ರ್ಯತೆ-ಅಸ್ಪಶ್ರ್ಯತೆ ಎಲ್ಲವೂ ಮರೆತುಹೋಗಿತ್ತು. ಟಿಕೇಟು ಕೊಡಲು ಬಂದಾಗ ಸೀಟಿಗೊಂದೇ ಟಿಕೇಟು ಸಿಗುವುದೆಂದು ಹೇಳಿದರು. ‘ನೀವು ನೋಡಿ, ನಾನು ಹೊರಗೆ ಕಾಯುತ್ತೇನೆ’ ಎಂದ ಸಾಂತು. ನಾನು ಬೇಡವೆಂದೆ. ಇಬ್ಬರೂ ನಿರಾಸೆಯಿಂದ ಮನೆಗೆ ಮರಳಿದೆವು. ನಾನು ಮತ್ತೆ ಕೋಟಿ ಚೆನ್ನಯ ನೋಡಿದ್ದು ಎಷ್ಟೋ ವರ್ಷಗಳ ನಂತರ.
ಆದರೆ ಅಸ್ಪೃಶ್ಯತೆ, ಜಾತಿಭೇದ ಇತ್ಯಾದಿ ಭಾವನೆಗಳು ಅಂದೇ ನನ್ನ ಮನಸ್ಸಿನಿಂದ ಅಳಿಸಿಹೋದವು. ಒಂದು ತುಳು ಚಿತ್ರ ಪರೋಕ್ಷವಾಗಿ ಅಷ್ಟು ಕೆಲಸ ಮಾಡಿತ್ತು.
-ನಿಖಿಲ್ ಕೋಲ್ಪೆ, ಪತ್ರಕರ್ತ

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers