WWW.TULUFILM.COM
+91 96327 14896 info@tulufilm.com
News
ತುಳು ಚಿತ್ರರಂಗಕ್ಕೆ ಮೀಸಲಾದ ಪ್ರಪ್ರಥಮ ವೆಬ್ ಸೈಟ್
Published on 28 September 2016
tulufilm logo new 1

ತುಳು ಚಿತ್ರರಂಗಕ್ಕೆ ಮೀಸಲಾದ ಪ್ರಪ್ರಥಮ ವೆಬ್ ಸೈಟ್
ಮಾನವನ ಕಲ್ಪನೆಗಳಿಗೆ ಹೊಸ ಆಯಾಮ ನೀಡಿ ಮನಸ್ಸಿನೊಳಗೊಂದು ಮಾಯಾಲೋಕ ಸೃಷ್ಟಿಸಿದ ಸಿನಿಮಾ ಕಲೆ ಭಾರತೀಯ ನೆಲವನ್ನು ಪ್ರವೇಶಿಸಿದ್ದು ಎಷ್ಟೋ ತಡವಾಗಿ. ಇಲ್ಲಿನ ಜನರ ಕಲಾವಂತಿಕೆ, ಸೃಜನಶೀಲತೆ ಮತ್ತು ಸಾಹಸ ಪ್ರವೃತ್ತಿಯ ಪರಿಣಾಮವಾಗಿ ಅದು ಇಲ್ಲಿನ ಮಣ್ಣಿನಲ್ಲಿಯೂ ಜನಮಾನಸದಲ್ಲಿಯೂ ಆಳವಾಗಿ ಬೇರೂರಿ ನಿಂತಿತು. ಇಂದು ಅದು ಹೆಮ್ಮರವಾಗಿ ಬೆಳೆದುನಿಂತಿದೆ. ಜಗತ್ತಿನಲ್ಲಿಯೇ ಪ್ರತೀ ವರ್ಷ ಅತ್ಯಂತ ಹೆಚ್ಚು ಸಂಖ್ಯೆಯ ಚಿತ್ರಗಳನ್ನು ನಿರ್ಮಿಸುವ, ಅತ್ಯಂತ ಹೆಚ್ಚು ಪ್ರೇಕ್ಷಕರಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದ್ದು.
ಚಿತ್ರೋದ್ಯಮವು ಭಾರತದಲ್ಲಿ ಮೊದಲು ಬೇರೂರಿದ್ದು, ಮುಂಬಯಿಯಲ್ಲಿ- ಹಿಂದಿ ಚಿತ್ರರಂಗದ ರೂಪದಲ್ಲಿ. ಆಗ ಕೇವಲ ಪ್ರಾದೇಶಿಕ ಭಾಷೆಯಾಗಿದ್ದ ಹಿಂದಿ, ಸಾವಿರಾರು ಭಾಷೆಗಳಿರುವ ಒಂದು ರೀತಿಯಲ್ಲಿ ಸಂಪರ್ಕ ಭಾಷೆಯಾಗಿ ಬೆಳೆಯುತ್ತಿತ್ತು. ಹಿಂದಿ ಚಿತ್ರಗಳಿಗೆ ಈ ಪ್ರಕ್ರಿಯೆ ನೆರವನ್ನು ಒದಗಿಸಿದಂತೆಯೇ ಹಿಂದಿ ಭಾಷೆಯ ಬೆಳವಣಿಗೆ ಮತ್ತುಪ್ರಚಾರಕ್ಕೆ ಹಿಂದಿ ಚಿತ್ರರಂಗವೂ ದೊಡ್ಡ ಪಾಲನ್ನು ಸಲ್ಲಿಸಿದೆ. ಇದೀಗ ಹಿಂದಿ ಚಿತ್ರರಂಗವು ಅಮೇರಿಕಾದ ಹಾಲಿವುಡ್ ಮಾದರಿಯಲ್ಲಿ ಬಾಲಿವುಡ್ ಎಂದು ಕರೆಯಲ್ಪಡುತ್ತಿದೆ.
ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಅತೀಹೆಚ್ಚು ಜನರು ಮಾತನಾಡುವ ಬಂಗಾಳಿ ಭಾಷೆಯಲ್ಲಿ ಸ್ವಲ್ಪವೇ ಸಮಯದಲ್ಲಿ ಚಿತ್ರರಂಗದ ಜನನವಾಯಿತು. ಅದು ಕಲಾತ್ಮಕತೆಯಿಂದ ವಿಶ್ವವಿಖ್ಯಾತವೂ ಆಯಿತು. ಅದು ಟಾಲಿವುಡ್ ಎಂದು ಹೆಸರಾಯಿತು.
ಇನ್ನೊಂದು ಅತ್ಯಂತ ಪುರಾತನ ಪ್ರಾದೇಶಿಕ ಭಾಷೆ ತಮಿಳು ಕೂಡಾ ಹಿಂದೆ ಉಳಿಯಲಿಲ್ಲ. ತನ್ನದೇ ಸ್ಟುಡಿಯೋಗಳು, ತನ್ನದೇ ತಂತ್ರಜ್ಞಾನ ಇತ್ಯಾದಿಗಳನ್ನು ಒದಗಿಸಿಕೊಂಡ ತಮಿಳು ಚಿತ್ರರಂಗವು ಕನ್ನಡ, ಮಲಯಾಳಂ, ತೆಲುಗು ಅಷ್ಟೇ ಏಕೆ, ಆರಂಭದ ದಿನಗಳಲ್ಲಿ ತುಳು ಭಾಷೆಯ ಚಿತ್ರಗಳಿಗೂ ತಂತ್ರಜ್ಞಾನ ಒದಗಿಸಿ ಅವುಗಳ ಬೆಳವಣಿಗೆಗೆ ಕಾರಣವಾಯಿತು.
ಕನ್ನಡ ಚಿತ್ರರಂಗವೇ ಎಡಿಟಿಂಗ್, ಡಬ್ಬಿಂಗ್ ಇತ್ಯಾದಿಗಳಿಗೆ ಮದ್ರಾಸ್ಗೆ ಹೋಗಬೇಕಾಗಿದ್ದ ಕಾಲದಲ್ಲಿ ಕೆಲವೇ ಲಕ್ಷ ಜನರು ಮಾತನಾಡುತ್ತಿದ್ದ ಪ್ರಾದೇಶಿಕ ಭಾಷೆಯಾದ ತುಳುವಿನಲ್ಲಿ- ಅದೆಷ್ಟೇ ಶ್ರೀಮಂತ ಭಾಷೆಯಾಗಿದ್ದರೂ- ಚಿತ್ರರಂಗ ಬೆಳೆದುಬರುವುದು ಬಹುತೇಕ ಅಸಾಧ್ಯವಾಗಿತ್ತು. ಕೆಲವು ಸಾಹಸಿಗರು ಈ ಅಸಾಧ್ಯವನ್ನೇ ಸಾಧ್ಯಮಾಡಿ ತೋರಿಸಿ ತುಳುಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದರು. 1971ರಲ್ಲಿ ತೆರೆಕಂಡ ಎಸ್.ಆರ್.ರಾಜನ್ ನಿರ್ಮಿಸಿ ನಿರ್ದೇಶಿಸಿದ ‘ಎನ್ನ ತಂಗಡಿ’ ಮತ್ತು ಕೆ.ಎನ್.ಟೇಲರ್ ಹಾಗೂ ನಾರಾಯಣ ಪುತ್ರನ್ ನಿರ್ಮಿಸಿ, ಆರೂರು ಪಟ್ಟಾಭಿ ನಿರ್ದೇಶಿಸಿದ ‘ದಾರೆದ ಬುಡೆದಿ’ ಚಿತ್ರಗಳಿಂದ ಬೆಳೆದುಬಂದ ತುಳುಚಿತ್ರರಂಗವು ನಡುನಡುವೆ ಎಡವುತ್ತಾ ಸಾಗಿದರೂ ಇದೀಗ ಹಾಲಿವುಡ್, ಬಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಮಾದರಿಯಲ್ಲಿಯೇ ಕೋಸ್ಟಲ್ ವುಡ್ ಎಂದು ಕರೆಸಿಕೊಳ್ಳುತ್ತಾ ಸ್ವತಂತ್ರ ಅಸ್ತಿತ್ವವನ್ನು ಪಡೆದುಕೊಂಡಿರುವುದು ಚಿಕ್ಕ ಸಾಧನೆಯೇನಲ್ಲ. ಇಂದು ತುಳುಚಿತ್ರರಂಗವು ತಾಂತ್ರಿಕವಾಗಿಯೂ ಉನ್ನತ ಗುಣಮಟ್ಟವನ್ನು ಪಡೆದಿರುವುದು ಮಾತ್ರವಲ್ಲ, ವಾಣಿಜ್ಯವಾಗಿಯೂ ಯಶಸ್ವಿಯಾಗುವ ಎಲ್ಲಾ ಸಾಧ್ಯತೆಗಳನ್ನು ತೋರಿಸಿದ್ದು, ಹೊಸಹೊಸ ನಿರ್ಮಾಪಕ, ನಿರ್ದೇಶಕರು ತುಳು ಚಿತ್ರಗಳ ನಿರ್ಮಾಣಕ್ಕೆ ಮುಂದೆಬರುತ್ತಿದ್ದಾರೆ.
ಈ ಸಾಧನೆಯ ಹಾದಿಯಲ್ಲಿ ಹಲವಾರು ಸಾಹಸಿ ನಿರ್ಮಾಪಕರು, ನಿರ್ದೇಶಕರು, ಕಥೆಗಾರರು, ಗೀತರಚನಕಾರರು, ಸಂಗೀತ ನಿರ್ದೇಶಕರು, ಕಲಾವಿದರು ಮತ್ತು ತಂತ್ರಜ್ಞರು ತಮ್ಮ ಪಾಲು ನೀಡಿದ್ದಾರೆ. ಇವರನ್ನು ಒಬ್ಬೊಬ್ಬರಾಗಿ ಹೆಸರಿಸಲು ಹೊರಡುವುದು ದುಸ್ಸಾಹಸದ ಕೆಲಸವಾದೀತು.
ಆದರೂ, ತುಳು ಚಿತ್ರರಂಗದ ಎಲ್ಲಾ ಆಯಾಮಗಳ, ಅದಕ್ಕಾಗಿ ಶ್ರಮಿಸಿದ ಎಲ್ಲಾ ಪ್ರಮುಖ ವ್ಯಕ್ತಿಗಳ, ಸಂಸ್ಥೆಗಳ ಪರಿಚಯ ಮಾಡಿಕೊಡುವುದು ಮತ್ತು ಇಡೀ ತುಳು ಚಿತ್ರರಂಗದ ಸಮಗ್ರ ಚಿತ್ರಣ ನೀಡುವುದು, ಅದರ ಇತಿಹಾಸದ ನಡೆಗಳನ್ನು ದಾಖಲಿಸುವುದು ಈ ವೆಬ್ ಸೈಟಿನ ಉದ್ದೇಶ.
ಇಂದು ಹಲವಾರು ಹಳೆಯ ತುಳು ಚಿತ್ರಗಳ ಪ್ರಿಂಟ್ ಬಿಡಿ, ಅದಕ್ಕೆ ಸಂಬಂಧಿಸಿದ ಛಾಯಾಚಿತ್ರಗಳಾಗಲೀ, ದಾಖಲೆಗಳಾಗಲೀ ಸಿಗುತ್ತಿಲ್ಲ. ಕೆಲವು ಸಂಪೂರ್ಣವಾಗಿ ಹೇಳಹೆಸರಿಲ್ಲದಂತೆ ನಾಶವಾಗಿದ್ದರೆ, ಇನ್ನು ಕೆಲವು ಖಾಸಗಿ ಸಂಗ್ರಹಗಳಲ್ಲಿ ಕುಟುಕು ಜೀವ ಉಳಿಸಿಕೊಂಡಿವೆ. ಹಳೆಯ ತುಳು ಚಿತ್ರಗೀತೆಗಳು ತುಳುವರ ನಾಲಗೆಗಳಲ್ಲಿ ಇನ್ನೂ ಅರೆಬರೆಯಾಗಿ ಜೀವಂತವಾಗಿವೆಯಾದರೂ, ಅವುಗಳ ಪೂರ್ಣ ಪಠ್ಯ ಅಥವಾ ಕ್ಯಾಸೆಟ್ ಇತ್ಯಾದಿ ಕೂಡಾ ಸಿಗುವುದಿಲ್ಲ. ಇವುಗಳೆಲ್ಲವನ್ನೂ ಸಂಗ್ರಹಿಸಿ, ತುಳುವರ ಕಣ್ಣಮುಂದಿಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಜೊತೆಗೆ ಹಿರಿಯ, ಕಿರಿಯ ಉದಯೋನ್ಮುಖ ನಿರ್ಮಾಪಕರು, ನಿರ್ದೇಶಕರು, ನಟ-ನಟಿಯರು, ತಂತ್ರಜ್ಞರು, ಲೇಖಕರು, ಗೀತರಚನೆಕಾರರು, ಸಂಗೀತ ನಿರ್ದೇಶಕರು, ವಿತರಕರು, ಪ್ರದರ್ಶಕರು ಮುಂತಾಗಿ ಎಲ್ಲರ ಪರಿಚಯ, ಸಂದರ್ಶನ ಹಾಗೂ ಜೊತೆಗೆ ತುಳು ಚಿತ್ರರಂಗದ ತಾಜಾ ಹಾಗೂ ಸ್ವಾರಸ್ಯಕರ ಸುದ್ದಿಹನಿಗಳನ್ನು ನೀಡುವ ಉದ್ದೇಶ ನಮ್ಮದು. ನಿಮ್ಮ ಬೆಂಬಲ ನಮಗೆ ಸದಾ ಇರಲಿ.

 

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers