WWW.TULUFILM.COM
+91 96327 14896 info@tulufilm.com
Profiles
ಡಾ. ರಿಚರ್ಡ್ ಕ್ಯಾಸ್ಟಲಿನೋ
Published on 8 October 2016

ಡಾ. ರಿಚರ್ಡ್ ಕ್ಯಾಸ್ಟಲಿನೋ
ಅತ್ಯಂತ ಹೆಚ್ಚು ತುಳು ಚಿತ್ರಗಳನ್ನು ನಿರ್ಮಿಸಿದ ಕೀರ್ತಿ ಡಾ. ರಿಚರ್ಡ್ ಕ್ಯಾಸ್ಟಲಿನೋ ಅವರದ್ದು. ಅದು ಮಾತ್ರವಲ್ಲದೆ, ಕರ್ನಾಟಕದ ನಾಲ್ಕು ಪ್ರಮುಖ ಭಾಷೆಗಳಾದ ಕನ್ನಡ, ತುಳು, ಕೊಂಕಣಿ ಮತ್ತು ಕೊಡವ ಭಾಷೆಗಳಲ್ಲಿ ಚಿತ್ರ ನಿರ್ಮಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಪ್ರಪ್ರಥಮ ತುಳು ಸಿನಿಮಾಸ್ಕೋಪ್ ಚಿತ್ರ ನಿರ್ಮಿಸಿದವರೂ ಅವರೇ.
ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿದ್ದರೂ, ಪ್ರವೃತ್ತಿಯಲ್ಲಿ ಅಪ್ಪಟ ಕಲಾವಿದರಾಗಿರುವ ಕ್ಯಾಸ್ಟಲಿನೋ ಅವರು, ಹೊಟೇಲ್ ಉದ್ಯಮ ಮುಂತಾದವುಗಳ ಜೊತೆ ರಂಗಭೂಮಿ ಮತ್ತು ಚಲನಚಿತ್ರರಂಗದೊಂದಿಗೆ ನಂಟು ಬೆಳೆಸಿಕೊಂಡರು. 1976ರಲ್ಲಿಯೇ ‘ಅರುಣ್ ಕಿರಣ್ ಪ್ರೊಡಕ್ಷನ್ಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ಕನ್ನಡ, ತುಳು, ಕೊಂಕಣಿ ನಾಟಕಗಳು, ನಾಟಕ ಸಪ್ತಾಹಗಳು, ರಸಮಂಜರಿ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದರು. ತಾನೇ ಮುಂದಾಳಾಗಿ ಕಲಾವಿದರ ಸಂಘವನ್ನು ಕಟ್ಟಿ, ದಕ್ಷಿಣ ಭಾರತ ಕಲಾವಿದರ ಬೃಹತ್ ಸಮ್ಮೇಳವನ್ನು ಆಯೋಜಿದರು.
ನಂತರ ಆರೂರು ಪಟ್ಟಾಭಿ ನಿರ್ದೇಶನದ ‘ಬೊಳ್ಳಿದೋಟ’ ತುಳು ಚಿತ್ರ ತಂಡದೊಂದಿಗೆ ಸೇರಿಕೊಂಡ ಚಿತ್ರರಂಗದ ಅನುಭವ ಪಡೆದರು. ‘ಹಾಲಿವುಡ್ ಫಿಲಂಸ್’ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ 1978ರಲ್ಲಿ ‘ನ್ಯಾಯೊಗಾದ್ ಎನ್ನ ಬದ್ಕ್’ ತುಳು ಚಿತ್ರದ ನಿರ್ಮಾಣ ಆರಂಭಿಸಿದರು. ಚಿತ್ರ 1979ರಲ್ಲಿ ಬಿಡುಗಡೆಗೊಂಡಿತು. 1990ರಲ್ಲಿ ರಾಜಲಕ್ಷ್ಮೀ ಫಿಲಂಸ್ ಲಾಂಛನದಲ್ಲಿ ತುಳುವಿನ ಮೊದಲ ಸಿನಿಮಾಸ್ಕೋಪ್ ಚಿತ್ರ ‘ಬಂಗಾರ್ ಪಟ್ಲೇರ್’ ಚಿತ್ರವನ್ನು ನಿರ್ಮಿಸಿ, ಸ್ವತಃ ನಿರ್ದೇಶಿಸಿದರು. ಈ ಚಿತ್ರ ಜನಪ್ರಿಯವಾಯಿತು ಮಾತ್ರವಲ್ಲ, ಪ್ರಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಗೂ ಪಾತ್ರವಾಯಿತು.
1994ರಲ್ಲಿ ‘ಸೆಪ್ಟೆಂಬರ್ 8’ ಎಂಬ ಚಿತ್ರವನ್ನು ವಿವಿಧ ಕಡೆಗಳಲ್ಲಿ ಕೇವಲ 24 ಗಂಟೆಗಳ ಒಳಗೆ ಚಿತ್ರೀಕರಿಸಿ ದಾಖಲೆ ನಿರ್ಮಿಸಿ, ನಿರ್ದೇಶಿದವರು ರಿಚರ್ಡ್ ಕ್ಯಾಸ್ಟಲಿನೋ. ತುಳು ಚಿತ್ರಗಳನ್ನು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೂ ಕೊಂಡೊಯ್ದಿದ್ದಾರೆ. ನಂತರ ‘ಬದಿ’ ಚಿತ್ರದ ನಿರ್ಮಾಣ, ನಿರ್ದೇಶನ ಅವರದ್ದೇ.
ತಮ್ಮ ಕೆಲವು ಚಿತ್ರಗಳಿಗೆ ಕಥೆ, ಚಿತ್ರಕಥೆಯನ್ನು ಅವರೇ ಬರೆದಿದ್ದು, ಗೀತಸಾಹಿತ್ಯದಲ್ಲಿಯೂ ಕೈಯಾಡಿಸಿದ್ದಾರೆ. ಕ್ರಿಯಾಶೀಲ ವ್ಯಕ್ತಿತ್ವದ ಅವರು ತುಳು ಚಿತ್ರರಂಗಕ್ಕೆ ಮಹತ್ತರ ಕೊಡುಗೆ ನೀಡಿದವರಲ್ಲಿ ಒಬ್ಬರು.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers