WWW.TULUFILM.COM
+91 96327 14896 info@tulufilm.com
Profiles
ಟಿ. ಎ. ಶ್ರೀನಿವಾಸ್
Published on 8 October 2016
1002

ಟಿ. ಎ. ಶ್ರೀನಿವಾಸ್
ಒಂದು ಉದ್ಯಮವಾಗಿ ಚಿತ್ರರಂಗದಲ್ಲಿ ನಿರ್ಮಾಪಕರು ಮತ್ತು ವಿತರಕರು ಅತೀ ಮುಖ್ಯ. ಈ ಎರಡು ಕ್ಷೇತ್ರಗಳಲ್ಲಿ ತುಳು ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದವರೇ ತಲಚ್ಚೇರಿ ಆನಂದ ಶ್ರೀನಿವಾಸ್ ಅಥವಾ ಟಿ.ಎ. ಶ್ರೀನಿವಾಸ್.
ಬಿ.ಎ. ಪದವೀಧರರಾದ ಅವರು ಉಡುಪಿಯಲ್ಲಿ ರಾಮಕೃಷ್ಣ ಥಿಯೇಟರ್ ಲಿಮಿಟೆಡ್ ಸಂಸ್ಥೆಯಲ್ಲಿ ಉದ್ಯೋಗ ಮಾಡಿ ಅನುಭವ ಪಡೆದರು. ಅಲ್ಲಿ ಕಾರ್ಯದರ್ಶಿಯೂ ಆದರು. ಆಗಿನ ಕಾಲದಲ್ಲಿ ಚಿತ್ರ ವಿತರಕರನ್ನು ಹುಡುಕಿಕೊಂಡು ಬೆಂಗಳೂರಿಗೆ ಹೋಗಬೇಕಾಗಿತ್ತು. ಅಂತಹ ಕಾಲದಲ್ಲಿ ಅವರು 1970ರಲ್ಲಿ ‘ಚಿತ್ರ ಭಾರತಿ’ ವಿತರಣಾ ಸಂಸ್ಥೆಯನ್ನು ಹುಟ್ಟುಹಾಕುವ ಸಾಹಸಕ್ಕಿಳಿದರು. ಉಡುಪಿಯಲ್ಲಿ ಆರಂಭವಾದ ಈ ಸಂಸ್ಥೆ ಒಂದೇ ವರ್ಷದಲ್ಲಿ ಬೆಳೆದುನಿಂತು ಮಂಗಳೂರಿನಲ್ಲಿ ವಿ.ವಿ. ಕಾಲೇಜಿನ ಎದುರು ವಿಶಾಲವಾದ ಕಚೇರಿಯನ್ನು ಹೊಂದಿತು. ಅನೇಕ ಕನ್ನಡ ಚಿತ್ರಗಳನ್ನು ತುಳುನಾಡಿನ ಜನರ ಮುಂದಿಡುವುದರ ಜೊತೆಗೆ ಅನೇಕ ತುಳು ಚಿತ್ರಗಳನ್ನು ಹೊರನಾಡಿನಲ್ಲೂ ಪ್ರದರ್ಶಿಸಿದ ಕೀರ್ತಿ ಅವರದ್ದು.
ತುಳು ಚಿತ್ರರಂಗದಿಂದಾಗಿ ಅವರು ಅನೇಕ ಏರುಪೇರುಗಳನ್ನು ಕಂಡಿದ್ದಾರೆ. ಇದರಿಂದ ಉಬ್ಬದೇ, ಕುಗ್ಗದೇ ಸಮಚಿತ್ತದಿಂದ, ಮಾತು ಕಡಿಮೆ ಹೆಚ್ಚು ದುಡಿಮೆ ಎಂಬ ತತ್ತ್ವವನ್ನು ಅನುಸರಿಸಿದ ಸರಳ ಸಜ್ಜನಿಕೆಯ ವ್ಯಕ್ತಿ.
ಅವರು ‘ಎನ್ನ ತಂಗಡಿ’ ಎಂಬ ಮೊದಲ ಚಿತ್ರಕ್ಕೆ ವೆಚ್ಚವಾದ 50,000 ರೂ.ಗಳಲ್ಲಿ ಆ ಕಾಲದ 35,000 ರೂ.ಗಳನ್ನು ಭರಿಸಿ 20,000 ರೂ.ಗಳನ್ನು ಕಳೆದುಕೊಂಡರು. ನಂತರ ಕೆ.ಎನ್. ಟೇಲರ್ ಅವರು ನಟಿಸಿದ್ದ ‘ಬಿಸತ್ತಿ ಬಾಬು’, ‘ಪಗೆತ ಪುಗೆ’, ‘ಏರ್ ಮಲ್ತಿನ ತಪ್ಪು’, ‘ಸಾವಿರಡೊರ್ತಿ ಸಾವಿತ್ರಿ’ ಚಿತ್ರಗಳಿಗೆ ಆರ್ಥಿಕ ಸಹಾಯ ನೀಡಿ ಹಂಚಿಕೆದಾರರಾದರು. ನಂತರ ಡಾ. ಸಂಜೀವ ದಂಡಕೇರಿಯವರ ‘ಬಯ್ಯ ಮಲ್ಲಿಗೆ’ ಚಿತ್ರಕ್ಕೂ ಹಂಚಿಕೆದಾರರಾದರು. ಅವುಗಳಲ್ಲಿ 1975ರಲ್ಲಿ ಬಿಡುಗಡೆಗೊಂಡ ‘ಸಾವಿರಡೊರ್ತಿ ಸಾವಿತ್ರಿ’ ಹೊರತುಪಡಿಸಿ ಎಲ್ಲಾ ಚಿತ್ರಗಳು ಯಶಸ್ವಿಯಾಗಿದ್ದವು. ಆ ಚಿತ್ರಕ್ಕೆ ವಿಪರೀತ ಬಂಡವಾಳ ಹೂಡಿದ್ದುದರಿಂದ ಭಾರೀ ಆರ್ಥಿಕ ನಷ್ಟ ಅನುಭವಿಸಬೇಕಾಯಿತು. ಆ ಸಂದರ್ಭದಲ್ಲಿ ಅವರು ಪ್ರಮುಖ ತಾಲೂಕು ಕೇಂದ್ರಗಳಲ್ಲಿ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಲ್ಲೂ ಚಿತ್ರ ವಿತರಣೆ ಆರಂಭಿಸಿದರು.
1981ರಲ್ಲಿ ‘ನಿರ್ಮಿತಾ ಮೂವೀಸ್’ ಹೆಸರಿನಲ್ಲಿ ‘ಭಾಗ್ಯವಂತೆದಿ’ ಚಿತ್ರ ನಿರ್ಮಿಸಿ ರಂಗನಟ ಸದಾಶಿವ ಸಾಲ್ಯಾನ್ ಮತ್ತು ಸಾಹಸ ನಿರ್ದೇಶಕ ರಾಮ್ ಶೆಟ್ಟಿಯವರನ್ನು ತುಳು ಚಿತ್ರರಂಗಕ್ಕೆ ಪರಿಚಯಿಸಿದರು. ಅದು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆದುದಲ್ಲದೇ ರಾಜ್ಯ ಸರಕಾರದ ವಿಶೇಷ ಪ್ರಶಸ್ತಿಯನ್ನೂ ಗಳಿಸಿತು. 1990ರಲ್ಲಿ ಅವರು ನಿರ್ಮಿಸಲಾರಂಭಿಸಿದ ‘ಬದ್ ಕ್ ದ  ಬಿಲೆ’ ಚಿತ್ರವು ಆರ್ಥಿಕ ಅಡಚಣೆಗಳಿಂದ ವಿಳಂಬವಾಗಿ 1994ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಹೆಚ್ಚಿನ ಯಶಸ್ಸು ಕಾಣದೆ ಮತ್ತೊಮ್ಮೆ ಆರ್ಥಿಕ ಸಂಕಷ್ಟ ಎದುರಿಸಬೇಕಾಯಿತು.
ಹಾಗಿದ್ದರೂ, ಚಿತ್ರ ವಿತರಣೆಯನ್ನು ಮುಂದುವರಿಸಿ, ಅನೇಕ ತುಳು ಚಿತ್ರಗಳಿಗೆ ಆರ್ಥಿಕ ಸಹಾಯ ನೀಡಿದ ಟಿ.ಎ. ಶ್ರೀನಿವಾಸ್ ತುಳು ಚಿತ್ರರಂಗದಲ್ಲಿ ಅವಿಸ್ಮರಣೀಯರ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers