WWW.TULUFILM.COM
+91 96327 14896 info@tulufilm.com
Films
ಚಿತ್ರ : ದಾರೆದ ಬುಡೆದಿ -1971
Published on 19 August 2016
500

 

ಚಿತ್ರದಲ್ಲಿ ಕೆ.ಜೆ.ರಾಜ್,ವಿಜಯಕಲಾ,ಕೆ.ಎನ್.ಟೇಲರ್,ಶಶಿಕಲಾ,ನಾರಾಯಣ ಪುತ್ರನ್

ಚಿತ್ರ : ದಾರೆದ ಬುಡೆದಿ -1971
ನಿರ್ಮಾಣ : ಶರವು ಪಿಚ್ಚರ್ಸ್, ಮಂಗಳೂರು
ನಿರ್ಮಾಪಕರು : ಕೆ.ಎಸ್. ಟೇಲರ್, ನಾರಾಯಣ ಪುತ್ರನ್
ಸಂಗೀತ ನಿರ್ದೇಶನ : ರಾಜನ್ -ನಾಗೇಂದ್ರ
ನಿರ್ದೇಶನ : ಆರೂರು ಪಟ್ಟಾಭಿ
ತಾರಾಗಣ : ಕೆ. ಎನ್. ಟೇಲರ್,  ಸೋಮಶೇಖರ್ ಪುತ್ರನ್,   ರಾಮಚಂದ್ರ ಕೂಳೂರು, ನಾರಾಯಣ ಪುತ್ರನ್, ಲೀಲಾವತಿ, ಚಂದ್ರಕಲಾ, ಶಶಿಕಲಾ ಮತ್ತಿತರರು .

ತುಳು ಚಿತ್ರರಂಗದ ಮೇರುತಾರೆ ಕೆ.ಎನ್. ಟೇಲರ್ ಅವರು 1969ನೇ ಇಸವಿಯಲ್ಲಿಯೇ ಈ ಚಿತ್ರದ ಕನಸು ಕಂಡಿದ್ದರೂ, ಹಲವರನ್ನು ಆರ್ಥಿಕ ಸಹಾಯಕ್ಕಾಗಿ ಸಂಪರ್ಕಿಸಿದರೂ ಸಾಕಷ್ಟು ನೆರವು ಸಿಗದಿದ್ದುದರಿಂದ ತಾನೇ ಚಿತ್ರ ನಿರ್ಮಿಸುವ ಸಾಹಸಕ್ಕಿಳಿದರು. ಉದ್ಯಮಿ ದಿವಂಗತ ಮಲ್ಪೆ ಮಧ್ವರಾಜ್ ಅವರಿಂದ ಆರಂಭಿಕವಾಗಿ ಆರ್ಥಿಕ ನೆರವು ಪಡೆದು ನಾರಾಯಣ ಪುತ್ರನ್ ಅವರೊಂದಿಗೆ ಸೇರಿಕೊಂಡು ಶರವು ಪಿಕ್ಚರ್ಸ್ ಹೆಸರಿನಲ್ಲಿ ತಾವಿಬ್ಬರೇ ಹಣ ಹಾಕಿ ‘ದಾರೆದ ಬುಡೆದಿ ಚಿತ್ರವನ್ನು ನಿರ್ಮಿಸಿದರು.
ಭವಾನಿ ಶಂಕರ್ ಅವರ ಕಥೆಗೆ ಕೆ.ಎನ್.ಟೇಲರ್ ಅವರು ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಕನ್ನಡದಲ್ಲಿ ಪ್ರಸಿದ್ಧರಾಗಿದ್ದ ಆರೂರು ಪಟ್ಟಾಭಿಯವರು ನಿರ್ದೇಶನ ಮಾಡಿದ್ದಾರೆ. ಕೆ.ಕೆ. ಮೆನನ್ ಛಾಯಾಗ್ರಹಣದಲ್ಲಿ ಮಲ್ಪೆ ಮಧ್ವರಾಜರ ಮನೆ, ಹೆಂಚಿನ ಕಾರ್ಖಾನೆ, ಮಲ್ಪೆ ಬಂದರು, ಮಣಿಪಾಲ ಹೊಟೇಲ್, ಕೊಡವೂರು, ಕೆಮ್ಮಣ್ಣು, ಧರ್ಮಸ್ಥಳ, ಮಂಗಳೂರು ಮುಂತಾದ ಕಡೆಗಳಲ್ಲಿ ವಿವಿಧ ಹಂತಗಳಲ್ಲಿ 1970ರಲ್ಲಿಯೇ ಚಿತ್ರೀಕರಣ ಮುಗಿಸಲಾಯಿತು. ಆದರೆ, ತಾಂತ್ರಿಕ ಕೆಲಸಗಳಿಗೆ ಹಣದ ಕೊರತೆಯಾದುದರಿಂದ ಮೊದಲು ಚಿತ್ರೀಕರಣವಾದ ಈ ಚಿತ್ರ ಎರಡನೇ ತುಳು ಚಿತ್ರವಾಗಿ ಬಿಡುಗಡೆಯಾಯಿತು.
ಕೆ.ಎನ್.ಟೇಲರ್ ಹಾಗೂ ವಿಜಯ ಕುಮಾರ್ ಅವರು ಬರೆದ ಹಾಡುಗಳಿಗೆ ರಾಜನ್-ನಾಗೇಂದ್ರ ಅವರು ಸಂಗೀತ ನೀಡಿದ್ದು, ‘ಓ ಮಂಜುನಾಥ ಉಂದು ನ್ಯಾಯನಾ; ಎನ್ನ ಬದ್ಕ್ಗ್ ಅಡ್ಡ ಈ ಬತ್ತನಾ’ ಎಂಬ ಹಾಡು ತುಳುವರ ನಾಲಿಗೆಯ ಮೇಲೆ ನಲಿದಾಡಿತು. ಹಿನ್ನೆಲೆ ಗಾಯಕರಾಗಿ ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ ಅವರಂತಹ ದಿಗ್ಗಜಗಳ ಜೊತೆಗೆ ಸರೋಜಿನಿ ಪಟ್ಟಾಭಿ ಹಾಗೂ ನಾಗೇಂದ್ರ ಅವರು ಕೆಲಸ ಮಾಡಿದ್ದಾರೆ. ತಾರಾಗಣದಲ್ಲಿ ಸೋಮಶೇಖರ ಪುತ್ರನ್, ನಾರಾಯಣ ಪುತ್ರನ್, ಕೆ.ಎನ್.ಟೇಲರ್, ಕೆ.ಜೆ.ರಾಜ್, ರಾಮಚಂದ್ರ ಕೂಳೂರು, ಲೀಲಾವತಿ, ಶಶಿಕಲಾ, ಚಂದ್ರಕಲಾ, ವಸಂತಿ ಕುಂದಾಪುರ ಮುಂತಾದವರಿದ್ದರು.
ಹೆಂಚಿನ ಕಾರ್ಖಾನೆಯಲ್ಲಿ ದುಡಿದು ನೆಮ್ಮದಿಯ ಸಂಸಾರ ಮಾಡುತ್ತಿದ್ದ ಬಡ ದಂಪತಿಗಳಿಗೆ ಒಂದು ಸಲ ಲಾಟರಿಯಲ್ಲಿ ಹಣ ಸಿಗುತ್ತದೆ. ಇದರಿಂದ ರಾಮುವಿಗೆ ದುರಾಸೆ ಹುಟ್ಟುತ್ತದೆ. ಆತ ತಾನು ಕೆಲಸ ಮಾಡುತ್ತಿದ್ದ ಹೆಂಚಿನ ಕಾರ್ಖಾನೆಯ ಮಾಲಕನಾಗುತ್ತಾನೆ. ಹಣದ ಮದ ಹೆಚ್ಚಿ ವೇಶ್ಯೆಯೊಬ್ಬಳ ಸಂಗವಾಗುತ್ತದೆ. ಆತ ತನ್ನ ಪತ್ನಿಯನ್ನೇ ಕಡೆಗಣಿಸುತ್ತಾನೆ. ಕ್ರಮೇಣ ಹಣವೆಲ್ಲವನ್ನೂ ಕಳೆದುಕೊಂಡ ಮೇಲೆ ಬುದ್ದಿ ಬರುತ್ತದೆ. ಅವನ ಹೆಂಡತಿಯ ಬಳಿ ತೆರಳಿದಾಗ ಅವಳು ಅವನನ್ನು ಸ್ವೀಕರಿಸುತ್ತಾಳೆ. ನಂತರ ಬಡತನದಲ್ಲಿಯೇ ಆದರೂ, ನೆಮ್ಮದಿಯ ಬದುಕು ಸಾಗುತ್ತದೆ. ಇದು ಈ ಚಿತ್ರದ ಕಥೆಯ ಸಾರಾಂಶ.
ಸುಮಾರು ಒಂದು ಮುಕ್ಕಾಲು ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರವು ಕಾಂಗ್ರೆಸ್ ಧುರೀಣರಾಗಿದ್ದ ದಿವಂಗತ ಎ.ವಿಶ್ವನಾಥ್ ಅವರ ವಿಶ್ವಕಿರಣ್ ಸಂಸ್ಥೆಯ ಮೂಲಕ ಮಂಗಳೂರಿನ ರೂಪವಾಣಿ ಚಿತ್ರಮಂದಿರದಲ್ಲಿ 1971ರ ಮಾರ್ಚ್ 26ರಂದು ಬಿಡುಗಡೆಗೊಂಡು ದಿನಕ್ಕೆ ಐದು ದೇಖಾವೆಗಳಂತೆ ಐದು ವಾರಗಳ ಕಾಲ ಓಡಿತು. ಈ ಚಿತ್ರಕ್ಕೆ ಸರಕಾರದಿಂದ 50,000 ರೂ.ಗಳ ಸಹಾಯಧನವೂ ದೊರೆತುದರಿಂದ ಇದನ್ನು ಆರ್ಥಿಕವಾಗಿಯೂ ಯಶಸ್ವಿಯಾದ ಮೊದಲ ತುಳು ಚಿತ್ರ ಎಂದು ಗುರುತಿಸಬಹುದು.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers