WWW.TULUFILM.COM
+91 96327 14896 info@tulufilm.com
Profiles
ಕೆ.ಎನ್. ಟೇಲರ್
Published on 18 August 2016
36

ತುಳು ಚಿತ್ರ ನಿರ್ಮಾಪಕ ನಿರ್ದೇಶಕ, ಲೇಖಕ, ನಟನಾಗಿ ಮಿಂಚಿದ ಕೆ.ಎನ್. ಟೇಲರ್ ಅಥವಾ ಕಡಂದಲೆ ನಾರಾಯಣ ಟೇಲರ್ ಅವರನ್ನು ತುಳು ಚಿತ್ರರಂಗದ ಪಿತಾಮಹ ಎಂದು ಕರೆಯಬಹುದು. ಪ್ರಥಮ ಬಾರಿಗೆ ತುಳು ಚಿತ್ರ ನಿರ್ಮಾಣದ ಸಾಹಸಕ್ಕೆ ಕೈಯಿಕ್ಕಿದವರು ಅವರು ಎಂಬುದನ್ನು ನಿರಾಕರಿಸಲಾಗದು.
ಟೈಲರಿಂಗ್ ವೃತ್ತಿಯನ್ನು ಅನುಸರಿಸುತ್ತಲೇ ತುಳು ನಾಟಕಗಳನ್ನು ರಚಿಸಿ, 1958ರಲ್ಲಿ ತನ್ನದೇ ಆದ ಶ್ರೀ ಗಣೇಶ ನಾಟಕ ಸಭಾ ಎಂಬ ಸಂಸ್ಥೆಯನ್ನು ಕಟ್ಟಿ ಹಳ್ಳಿ ಹಳ್ಳಿಗಳಲ್ಲಿ ಮಾತ್ರವಲ್ಲ, ದೇಶದ ವಿವಿಧ ನಗರಗಳಲ್ಲಿ ಕೂಡಾ ನಾಟಕ ಪ್ರದರ್ಶಿಸಿ ಹೆಸರುವಾಸಿಯಾದ ಕೆ.ಎನ್.ಟೇಲರ್, ಮೊದಲ ಬಾರಿಗೆ ವಿದೇಶದಲ್ಲಿಯೂ ತುಳು ನಾಟಕವನ್ನು ಮೊತ್ತಮೊದಲ ಬಾರಿಗೆ ಪ್ರದರ್ಶಿಸಿದ ಕೀರ್ತಿ ಹೊಂದಿದ್ದಾರೆ. 20ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿರುವ ಅವರ 12ರಷ್ಟು ನಾಟಕಗಳು ಪ್ರಕಟಿತವಾಗಿವೆ.
‘ದಾರೆದ ಬುಡೆದಿ’ ಚಿತ್ರ ನಿರ್ಮಾಪಕ ಮತ್ತು ನಟರಾಗಿ ತುಳು ಚಿತ್ರರಂಗ ಪ್ರವೇಶಿಸಿದ ಅವರು, 10ರಷ್ಟು ತುಳು ಚಿತ್ರಗಳನ್ನು ಮಾಡಿ ಸ್ಟಾರ್ವ್ಯಾಲ್ಯೂ ಪಡೆದುಕೊಂಡರು. ನಿರ್ಮಾಣ, ಸಾಹಿತ್ಯ, ನಟನೆಯ ಜೊತೆಗೆ ನಿರ್ದೇಶನದಲ್ಲಿಯೂ ಕೈಯಾಡಿಸಿದ್ದಾರೆ. ‘ಪಗೆತ ಪುಗೆ’, ‘ಬಿಸತ್ತಿ ಬಾಬು’, ‘ಯಾನ್ ಸನ್ಯಾಸಿ ಆಪೆ’, ‘ಕಾಸ್ದಾಯೆ ಕಂಡನೆ’, ‘ಏರ್ ಮಲ್ತಿನ ತಪ್ಪು’, ‘ಸಾವಿರಡೊರ್ತಿ ಸಾವಿತ್ರಿ’, ‘ತುಳುನಾಡ ಸಿರಿ’, ‘ಭಾಗ್ಯವಂತೆದಿ’ ಮುಂತಾದವು ಅವರ ಪ್ರಮುಖ ಚಿತ್ರಗಳು.
ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಅವರು, ಭಾರತೀಯ ಚಲನ ಚಿತ್ರರಂಗದ ಶತಮಾನೋತ್ಸವದಲ್ಲಿ ರಾಷ್ಟ್ರ ಮಟ್ಟದಲ್ಲಿ ಸನ್ಮಾನ ಪಡೆದಿದ್ದರು.
ಪ್ರಪ್ರಥಮವಾಗಿ ತುಳು ಚಿತ್ರ ನಿರ್ಮಿಸಲು ಮುಂದಾದ ಸಾಹಸಿ ಕೆ.ಎನ್. ಟೇಲರ್. ಅವರು ಬಹಳ ಕಷ್ಟಪಟ್ಟು ನಿರ್ಮಿಸಿದ ‘ದಾರೆದ ಬುಡೆದಿ’ ಚಿತ್ರ  ಆರ್ಥಿಕ ಅಡಚಣೆಯಿಂದ ಎರಡನೆಯದಾಗಿ ಬಿಡುಗಡೆಯಾದರೂ, ತನ್ನ ಜನಪ್ರಿಯತೆಯಿಂದ ತುಳು ಚಿತ್ರರಂಗಕ್ಕೊಂದು ಅಡಿಪಾಯ ದೊರಕಿಸಿಕೊಟ್ಟಿತು. ವಿದ್ಯಾರ್ಥಿ ಜೀವನದಲ್ಲಿಯೇ ನಾಟಕ ರಂಗದತ್ತ ಆಕರ್ಷಿತರಾದರು ಕಡಂದಲೆ ನಾರಾಯಣ ಟೇಲರ್ ಅವರು ಆರಂಭದಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಲೇ ನಾಟಕಗಳನ್ನು ಬರೆದು, ನಟಿಸಿ, ನಿರ್ದೇಶಿಸುತ್ತಿದ್ದರು.
1958ರಲ್ಲಿ ಅವರು ತಮ್ಮದೇ ಆದ ‘ಶ್ರೀ ಗಣೇಶ ನಾಟಕ ಸಭಾ’ ಸ್ಥಾಪಿಸಿ ವೃತ್ತಿ ರಂಗಭೂಮಿಗೆ ಇಳಿದರು. ‘ತುಳು ನಾಟಕ ಪರ್ಬ’ ಹೆಸರಿನಲ್ಲಿ ಸತತ ತುಳು ನಾಟಕ ಪ್ರದರ್ಶಿಸಿದ ಮೊದಲಿಗರೂ ಅವರೇ. ಅವರ ನಾಟಕಗಳು ದೇಶದ ವಿವಿಧ ಭಾಗಗಳಲ್ಲಿ ಪ್ರದರ್ಶನ ಕಂಡಿವೆ. ವಿದೇಶದಲ್ಲಿ ತುಳು ನಾಟಕ ಪ್ರದರ್ಶಿಸಿದ ಮೊದಲಿಗರೂ ಅವರೇ. 20ಕ್ಕೂ ಹೆಚ್ಚು ತುಳು ನಾಟಕಗಳನ್ನು ಬರೆದಿರುವ ಅವರ 12ಕ್ಕೂ ಹೆಚ್ಚು ನಾಟಕಗಳು ಮುದ್ರಣಗೊಂಡು ಇಂದಿಗೂ ಜನಪ್ರಿಯವಾಗಿವೆ.
ತುಳು ಚಿತ್ರರಂಗದಲ್ಲಿ ಅವರ ಕೊಡುಗೆ ಮೇರುಸದೃಶವಾದದ್ದು. ‘ದಾರೆದ ಬುಡೆದಿ’ಯ ಬಳಿಕ ಅವರು ‘ಪಗೆತ ಪುಗೆ’, ‘ಬಿಸತ್ತಿ ಬಾಬು’, ‘ಯಾನ್ ಸನ್ಯಾಸಿ ಆಪೆ’, ‘ಕಾಸ್ದಾಯೆ ಕಂಡನೆ’, ‘ಏರ್ ಮಲ್ತಿನ ತಪ್ಪು’, ‘ತುಳುನಾಡ ಸಿರಿ’, ‘ಸಾವಿರಡೊರ್ತಿ ಸಾವಿತ್ರಿ’, ‘ಭಾಗ್ಯವಂತೆದಿ’- ಹೀಗೆ ಒಂಭತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಏರ್ ಮಲ್ತಿನ ತಪ್ಪು’ ಅವರು ನಿರ್ದೇಶಿಸಿದ ಪ್ರಥಮ ಚಿತ್ರ. ಅಲ್ಲದೇ ಅವರು ಹಲವಾರು ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಗೀತಸಾಹಿತ್ಯವನ್ನೂ ರಚಿಸಿದ್ದಾರೆ. ಅವರು ನಿರ್ದೇಶಿಸಿದ ಚಿತ್ರಗಳಲ್ಲಿ ಇನ್ನೊಂದು ‘ತುಳುನಾಡ ಸಿರಿ’. ಅವರು ‘ದಾರೆದ ಬುಡೆದಿ’, ‘ಏರ್ ಮಲ್ತಿನ ತಪ್ಪು’, ‘ಸಾವಿರಡೊರ್ತಿ ಸಾವಿತ್ರಿ’ ಚಿತ್ರಗಳ ನಿರ್ಮಾಪಕರೂ ಹೌದು.
ವಿವಿಧ ಕಡೆಗಳಲ್ಲಿ ಲೆಕ್ಕವಿಲ್ಲದಷ್ಟು ಸನ್ಮಾನ, ನೂರಕ್ಕೂ ಹೆಚ್ಚು ಗೌರವ ಪುರಸ್ಕಾರಗಳು ಅವರ ಮಡಿಲಿಗೇರಿವೆ. ಭಾರತೀಯ ಚಿತ್ರಗಂಗದ 100ರ ಸಂಭ್ರಮದಲ್ಲಿ ಸನ್ಮಾನ ಸ್ವೀಕರಿಸಿದ ತುಳು ಚಿತ್ರರಂಗದ ಏಕೈಕ ವ್ಯಕ್ತಿ. ಅವರಿಗೆ ಸಿಕ್ಕಿದ ಪ್ರಶಸ್ತಿಗಳಲ್ಲಿ ಮುಖ್ಯವಾದವುಗಳೆಂದರೆ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers